ಅಗ್ನಿ ಪರ್ವತಗಳು
	ಭೂಮಿಯ ಅಂತರಾಳದಿಂದ ಕುದಿಯುತ್ತಿರುವ ಲಾವಾರಸವನ್ನು ಹೊರಕ್ಕೆ ಉಗುಳುವ ಪರ್ವತಗಳಿಗೆ ಈ ಹೆಸರಿದೆ. ಇವನ್ನು ಜ್ವಾಲಾಮುಖಿಗಳೆಂದೂ ವಲ್ಕೆನೋಗಳೆಂದೂ ಕರೆಯುತ್ತಾರೆ. ವಲ್ಕೆನೊ ಎಂಬ ಹೆಸರು ಬಂದ್ದು ಸಿಸಿಲಿ ದ್ವೀಪದ ಉತ್ತರಕ್ಕಿರುವ ವಲ್‍ಕೆನೋ ಎಂಬ ದ್ವೀಪದಿಂದ. ಪ್ಲೇಟೊ, ಅರಿಸ್ಟಾಟಲ್, ಸ್ಟ್ರಾಬೊ ಮೊದಲಾದವರು ಇವುಗಳ ಚಟುವಟಿಕೆಗಳನ್ನು ವರ್ಣಿಸಿದ್ದಾರೆ. ಆದರೆ ಮೊಟ್ಟಮೊದಲ ವೈಜ್ಞಾನಿಕ ವರ್ಣನೆ ಸಿಕ್ಕುವುದು ಕ್ರಿ.ಶ. 79ರಲ್ಲಿದ್ದ ಇಟಲಿಯ ಕಿರಿಯ ಪ್ಲಿನಿಯ ಗ್ರಂಥದಲ್ಲಿ. ಆತ ಪ್ರಕೃತಿಯ ಉಪಾಸಕ. ಇಟಲಿ ದೇಶದ ಹರ್‍ಕುಲೇನಿಯಂ ಮತ್ತು ಪಾಂಪೆ ನಗರಗಳನ್ನು ನೆಲಸಮ ಮಾಡಿದ ವಸೂವಿಯಸ್ ಅಗ್ನಿಪರ್ವತ ಕಾದ ಪದಾರ್ಥಗಳನ್ನು ಕಾರುತ್ತಿರುವಾಗ ಬಹು ಸಮೀಪದ ದೃಶ್ಯವನ್ನು ನೋಡಲು ಹೋಗಿ ಅದರಿಂದ ಹೊರಹೊರಟ ವಿಷವಾಯುವಿನಿಂದ ಮೃತಪಟ್ಟ. ವಸೂವಿಯಸ್ ಪರ್ವತದ ಚಟುವಟಿಕೆ, ಹೊರಬಂದ ಪದಾರ್ಥಗಳ ವಿವರ ಇತ್ಯಾದಿಗಳನ್ನು ಈತ ಶಾಸ್ತ್ರೀಯವಾಗಿ ವರ್ಣಿಸಿದ್ದಾನೆ. ಅನಂತರ, ದೀರ್ಘಕಾಲ ಈ ಶಾಸ್ತ್ರಭಾಗ ಬೆಳೆಯಲಿಲ್ಲ. 1774ರಲ್ಲಿ ಸರ್ ವಿಲಿಯಂ ಹಾಮಿಲ್‍ಟನ್ ಕಣ್ಣಾರೆ ಕಂಡು ಅನುಭವಿಸಿದ ವಸೂವಿಯಸ್ ಮತ್ತು ಎಟ್ನಾ ಅಗ್ನಿ ಪರ್ವತಗಳ ದೃಶ್ಯಗಳನ್ನು ಚಿತ್ರಿಸಿದ್ದಾನೆ. ಅಲ್ಲಿಂದ ಈಚೆಗೆ 1820ರವರೆಗೆ ಹಲವು ಶಾಸ್ತ್ರಜ್ಞರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ.

	ಭೂಗೋಳದ ಮೂರರಲ್ಲೊಂದು ಪಾಲು ಭೂಭಾಗ, ಮಿಕ್ಕಪಾಲು ಜಲಭಾಗ. ಸಾಮಾನ್ಯವಾಗಿ ಭೂಭಾಗವೆಲ್ಲ ಮಣ್ಣು ಕಲ್ಲುಗಳಿಂದ ಕೂಡಿ ಶಿಲಾಮಂಡಲವೆಂದು ಹೆಸರು ಪಡೆದಿದೆ. ಇದರ ಮೇಲುಭಾಗದಿಂದ ತಳಭಾಗಕ್ಕೆ ಹೋದಂತೆಲ್ಲ ಉಷ್ಣಾಂಶ ಸಾಧಾರಣವಾಗಿ 60 ಅಡಿಗೆ 1º ಯಂತೆ ಹೆಚ್ಚುತ್ತ ಹೋಗಿ, ತಳಭಾಗದಲ್ಲಿ ವಿಶೇಷವಾದ ಉಷ್ಣತೆ ಕಂಡುಬರುತ್ತದೆ. ಹೀಗೆ ಹೆಚ್ಚುವ ಉಷ್ಣತೆಗೆ ಎರಡು ಕಾರಣಗಳುಂಟು. ಭೂಮಿ ಅನಿಲರೂಪದಿಂದ ದ್ರವರೂಪಕ್ಕೆ ಕುಗ್ಗಿ, ಅನಂತರ ಘನೀಭೂತವಾಗಿ, ಗೋಲವಾಗಿರುವುದರಿಂದ ವಿಶೇಷವಾದ ಉಷ್ಣ ಅದರ ಅಂತರಾಳದಲ್ಲಿ ಅಡಗಿದೆ. ಇದೇ ಮೂಲೋಷ್ಣ. ಜೊತೆಗೆ ಅಂತರಾಳದಲ್ಲಿ ಶಿಲಾಸಮೂಹಗಳೊಡನೆ ಥೋರಿಯಂ, ಯುರೇನಿಯಂ, ಹೀಲಿಯಂ ಇತ್ಯಾದಿ ವಿದ್ಯುತ್ ವಿಕಿರಣಶಕ್ತಿಯುಳ್ಳ ಖನಿಜಗಳು ಸಂಗ್ರಹವಾಗಿರುತ್ತವೆ. ಇವುಗಳ ಶಾಖ ಮೂಲೋಷ್ಣದ ಜೊತೆಗೆ ಸೇರಿ, ಭೂಮಿಯ ಅಂತರಾಳದಲ್ಲಿ ಹುದುಗಿರುವ ವಿಶೇಷವಾದ ಉಷ್ಣತೆಗೆ ಪೂರಕವಾಗುತ್ತದೆ. ಘನೀಭೂತವಾದ ಶಿಲಾಸಮೂಹ, ಸಂಗ್ರಹವಾದ ಉಷ್ಣತೆಯಿಂದ ದ್ರವರೂಪಕ್ಕೆ ಪರಿವರ್ತನೆಯಾಗಿ, ಒತ್ತಡದ ಅಧಿಕ್ಯ ಮಿತಿಮೀರಿದಾಗ ಭೂಮಿಯನ್ನು ಭೇದಿಸಿಕೊಂಡು ಹೊರಗೆ ಬರುತ್ತದೆ. ಇದೇ ಶಿಲಾರಸ (ಲಾವಾ), ಜೊತೆಗೆ ಕಲ್ಲು, ಮಣ್ಣು, ಅನಿಲಗಳು ಸಹ ಹೊರಬರುತ್ತವೆ. ಹೀಗೆ ಭೂಮಿಯ ತಳಭಾಗದಿಂದ ದೊಡ್ಡ ಬಿರುಕುಗಳ ಮೂಲಕ, ಕಾದು ಕರಗಿರುವ ಪದಾರ್ಥಗಳನ್ನು ಉಗುಳುವ ಪರ್ವತಗಳೇ ಅಗ್ನಿಪರ್ವತಗಳು.

	ಅಗ್ನಿಪರ್ವತ ಕೇವಲ ಕೆಲವು ಅಡಿಗಳ ಅಡ್ಡಳತೆಯುಳ್ಳ ಒಂದು ಸಣ್ಣ ದಿಬ್ಬವಾಗಿರಬಹುದು ಅಥವಾ ಸಮುದ್ರಮಟ್ಟಕ್ಕೆ 20,000` ಮೇಲ್ಮಟ್ಟದಲ್ಲಿರುವ ದೊಡ್ಡ ಪರ್ವತವಾಗಿರಬಹುದು (ಆಫ್ರಿಕದ ಕಿಲಿಮಂಜಾರೊ). ಸಾಮಾನ್ಯವಾಗಿ ಇದು ಬುಗುರಿಯಾಕೃತಿಯಾಗಿರುತ್ತದೆ. ಶಿಖರದಲ್ಲಿ ಕಂಡುಬರುವ ಹಳ್ಳ ಪ್ರದೇಶವೇ ಅಗ್ನಿಪರ್ವತದ ಬಾಯಿ ಅಥವಾ ಕುಂಡ (ಕ್ರೇಟರ್). ಭೂಗರ್ಭದಿಂದ ಪದಾರ್ಥಗಳೆಲ್ಲವೂ ಹೊರಬರುವುದು ಮುಖ್ಯವಾಗಿ ಈ ಕುಂಡದ ಮೂಲಕವೇ. ಒತ್ತಡ ಬಲು ಹೆಚ್ಚಾದಾಗ, ದ್ರವಪದಾರ್ಥಗಳು ಪ್ರಧಾನದ್ವಾರದಿಂದ ಹೊರಬರುತ್ತವೆ. ಇದಲ್ಲದೆ ಶಿಲಾರಸ ಅಂತಸ್ಸರಣವಾಗಿ ನೇರವಾಗಿಯೋ (ಡೈಕ್) ಸಮತಲವಾಗಿಯೋ (ಸಿಲ್) ಮರದ ಕೊಂಬೆಗಳೋಪಾದಿಯಲ್ಲಿ ಅನೇಕ ಬೀಳುಬಿರುಕುಗಳಲ್ಲಿ ಹರಡಿಕೊಳ್ಳುತ್ತದೆ.

	ಚಟುವಟಿಕೆಯ ದೃಷ್ಟಿಯಿಂದ ಅಗ್ನಿಪರ್ವತಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು. ಶಿಲಾರಸಾದಿಗಳನ್ನು ಉಗುಳಿ, ಹಾವಳಿ ಮಾಡುತ್ತ ಸದಾ ಚಟುವಟಿಕೆಯಿಂದಿರುವುವು ಜಾಗೃತ ಜ್ವಾಲಾಮುಖಿಗಳು (ಆ್ಯಕ್ಟಿವ್). ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುವು ಸುಪ್ತಜ್ವಾಲಾಮುಖಿಗಳು (ಡೋರ್‍ಮೆಂಟ್). ಚಟುವಟಿಕೆಗಳೆಲ್ಲವನ್ನೂ ಮುಗಿಸಿಕೊಂಡು, ಪೂರ್ಣವಾಗಿ ನಿಶ್ಯಬ್ಧವಾಗಿರುವುವು ಲುಪ್ತ ಜ್ವಾಲಾಮುಖಿಗಳು (ಎಕ್ಸ್‍ಟಿಂಗ್ಟ್). ಸಾಮಾನ್ಯವಾಗಿ ಅಗ್ನಿಪರ್ವತಗಳು ಕೇವಲ ಶಿಲಾರಸಾದಿಗಳನ್ನೇ ಹೊರಸೂಸದೆ, ಬಿಸಿನೀರನ್ನೋ ಅಥವಾ ಕಾದ ನುಣುಪಾದ ಬರಿಯ ಮಣ್ಣನ್ನೋ ಹೊರ ಚಿಮ್ಮಬಹುದು. ಅಂಥವನ್ನು ಬಿಸಿನೀರಿನ ಊಟೆ (ಗೈಸóರ್) ಗಳೆಂದೂ ಮೃತ್ತಿಕಾಗ್ನಿಪರ್ವತಗಳೆಂದೂ ಕರೆಯುತ್ತಾರೆ. ಕೆಲವು ಪರ್ವತಗಳು ಆವಿ, ಇಂಗಾಲಾಮ್ಲ, ಜಲಜನಕ ಮುಂತಾದ ಬರಿಯ ಅನಿಲಗಳನ್ನು ಹೊರಸೂಸುವುದುಂಟು. ಅಂಥವು ಅನಿಲರೂಪದ ಅಗ್ನಿಪರ್ವತಗಳು. ಬಿಸಿನೀರಿನ ಊಟೆಗಳಿಗೂ ಅನಿಲರೂಪದ ಅಗ್ನಿಪರ್ವತಗಳಿಗೂ ನಿಕಟವೂ ಸಹಜವೂ ಆದ ಸಂಬಂಧವಿರುತ್ತದೆ. ಬೇಸಗೆ ಕಾಲದಲ್ಲಿ ಜಲಾಂಶ ಕಡಿಮೆಯಾಗುವುದರಿಂದ, ಬಿಸಿ ನೀರಿನ ಊಟೆಗಳು ಅನಿಲರೂಪದ ಅಗ್ನಿಪರ್ವತಗಳಾಗಿಯೂ ಚಳಿಗಾಲ ಅಥವಾ ಮಳೆಗಾಲಗಳಲ್ಲಿ ಜಲಾಂಶ ಹೆಚ್ಚಾಗುವುದರಿಂದ ಅನಿಲರೂಪದ ಅಗ್ನಿಪರ್ವತಗಳು ಬಿಸಿ ನೀರಿನ ಊಟೆಗಳಾಗಿಯೂ ಪರಿವರ್ತನೆ ಹೊಂದುತ್ತವೆ. ಊಟೆಗಳು ಭೂಮಿಯ ಅಂತರಾಳದ ವಿಶೇಷವಾದ ಒತ್ತಡದಿಂದ ನೀರನ್ನು ನೂರಾರು ಅಡಿಗಳ ಎತ್ತರಕ್ಕೆ ಚಿಮ್ಮುತ್ತವೆ. ಅಮೆರಿಕದ ಎಲ್ಲೊ ಸ್ಟೋನ್ ನ್ಯಾಷನಲ್ ಪಾರ್ಕ್‍ನಲ್ಲಿಯೂ ಐಎಸ್‍ಲೆಂಡ್ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿಯೂ ಇವನ್ನು ಹೆಚ್ಚು ಕಾಣಬಹುದು. ನೀರನ್ನು ಚಿಮ್ಮುವ ಕಾಲ ಎಡೆಬಿಡದೆ ಐದು ಮಿನಿಟ್‍ಗಳಾದರೂ ಆಗಬಹುದು ಅಥವಾ ಐದು ವರ್ಷಗಳೇ ಆಗಬಹುದು. ಎಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿರುವ ಓಲ್ಡ್ ಫೇತ್ ಎಂಬುದು 66 ಮಿನಿಟ್‍ಗಳಿಗೊಮ್ಮೆ ನೀರನ್ನು 110`-160` ಎತ್ತರಕ್ಕೆ ಹೊರಚಿಮ್ಮುತ್ತದೆ.

	ಮೃತ್ತಿಕಾಗ್ನಿಪರ್ವತಗಳು ಭೂಮಂಡಲದಲ್ಲಿ ದ್ವಾರಗಳನ್ನು ಕಲ್ಪಿಸಿಕೊಂಡು, ಕೆಸರು ಮಣ್ಣುಗಳನ್ನು ಹೊರಕ್ಕೆ ಎರಚುತ್ತವೆ. ಈ ಕೆಸರುಮಣ್ಣು ಒಂದೇ ಕಡೆ ರಾಶಿಯಾಗಿ ಸಣ್ಣಗುಡ್ಡಗಳಾಗಿಯೋ ಬೆಟ್ಟಗಳಾಗಿಯೋ ಪರಿಣಮಿಸುತ್ತದೆ. ಒಂದು ವೇಳೆ ಗಾಳಿಯ ಹೊಡೆತ ಜಾಸ್ತಿಯಾಗಿದ್ದಲ್ಲಿ ಧೂಳು ಬಹು ದೂರಕ್ಕೆ ಒಯ್ಯಲ್ಪಡುತ್ತದೆ. 79ರಲ್ಲಿ ವಸೂವಿಯಸ್ ಅಗ್ನಿಪರ್ವತದಿಂದ ಹೊರಬಂದ ಧೂಳು ಪಾಂಪೆ ನಗರದಲ್ಲಿ 20`-25` ಎತ್ತರದಷ್ಟು ಭರ್ತಿಯಾಗಿ, ಪೂರ್ತಿ ನಗರವೇ ಮುಚ್ಚಿಹೋಯಿತು. ಹೀಗೆ ಹೊರಬೀಳುವ ಧೂಳು ಸಾಮಾನ್ಯವಾಗಿ ಇತರ ಲವಣಗಳೊಡನೆ ಸಂಯೋಜಿತವಾಗಿರುವುದರಿಂದ ವಿವಿಧಬಣ್ಣಗಳ ಮಣ್ಣಾಗಿ ಹೊರಬೀಳುತ್ತದೆ. ಇದರಿಂದಲೇ ಅಂಥ ಕಡೆ ಮೃತ್ತಿಕಾಗ್ನಿಪರ್ವತಗಳನ್ನು ಭೂತದ ಬಣ್ಣದ ಪೆಟ್ಟಿಗೆ ಎಂಬುದಾಗಿ ಕರೆಯುವ ವಾಡಿಕೆಯಿದೆ. ಬರ್ಮ, ಬಲೂಚಿಸ್ತಾನಗಳಲ್ಲಿ ಇವು ಕಂಡುಬರುತ್ತವೆ.

	ಅಗ್ನಿಪರ್ವತಗಳಿಂದ ಹೊರಬೀಳುವ ವಸ್ತುಗಳನ್ನು ಅನಿಲಾಂಶ, ಜಲಾಂಶ, ಘನಾಂಶಗಳೆಂದು ಮೂರು ಭಾಗಗಳಾಗಿ ಪ್ರತ್ಯೇಕಿಸಬಹುದು. ಇವು ಸಾಮಾನ್ಯವಾಗಿ ಒಂದಾದ ಮೇಲೊಂದು ಕ್ರಮವಾಗಿ ಹೊರ ಹೊಮ್ಮುತ್ತವೆ. ಅನಿಲಗಳಲ್ಲಿ ನೀರಿನ ಆವಿಯೇ ಹೆಚ್ಚು. ಈ ಆವಿ ಕೆಲವು ಕಡೆ ಮಳೆಯ ರೂಪದಲ್ಲಿ ಬೀಳುತ್ತದೆ. ಅನಿಲಗಳ ಜೊತೆಗೆ ಕಾರ್ಬನ್ ಮಾನಾಕ್ಸೈಡ್, ಕ್ಲೋರಿನ್, ಸಾರಜನಕ, ಅಮೋನಿಯ ಮತ್ತು ಗಂಧಕದ ವಿವಿಧ ಸಂಯುಕ್ತ ಅನಿಲಗಳು ಇರುತ್ತವೆ.

	ದ್ರವಾಂಶದ ಪೈಕಿ ಶಿಲಾರಸವೇ ಮುಖ್ಯವಾದ್ದು. ಇದರ ಸ್ವಭಾವ, ಚಹರೆ, ಬಣ್ಣ ಇತ್ಯಾದಿಗಳು ಮುಖ್ಯವಾಗಿ ರಾಸಾಯನಿಕ ಸಂಯೋಜನೆಯನ್ನನುಸರಿಸುತ್ತವೆ. ರಾಸಾಯನಿಕ ದೃಷ್ಟಿಯಿಂದ ಶಿಲಾರಸಗಳಲ್ಲಿ ಎರಡು ವಿಧ. 50%ಕ್ಕಿಂತಲೂ ಹೆಚ್ಚು ಸಿಲಿಕ ಸಂಯೋಜಿತವಾಗಿರುವವುಗಳನ್ನು ಆಮ್ಲ ಶಿಲಾರಸಗಳೆಂದೂ (ಆ್ಯಸಿಡ್) 50%ಕ್ಕಿಂತಲೂ ಕಡಿಮೆ ಸಿಲಿಕ ಸಂಯೋಜಿತವಾಗಿರುವವುಗಳನ್ನು ಪ್ರತ್ಯಾಮ್ಲ ಶಿಲಾರಸಗಳೆಂದೂ (ಬೇಸಿಕ್) ವಿಂಗಡಿಸಿದ್ದಾರೆ. ಆಮ್ಲಶಿಲಾರಸಗಳು ಬಿಳಿ ಅಥವಾ ಬೂದು ಮಿಶ್ರವಾದ ಪ್ರತ್ಯಾಮ್ಲ ಶಿಲಾರಸಗಳು ತೀರ ಕಪ್ಪಗೂ ಇರುತ್ತವೆ. ಶಿಲಾರಸದ ಉಷ್ಣತೆಯನ್ನು ನಿರ್ದಿಷ್ಟವಾಗಿ ಕಂಡುಹಿಡಿಯುವುದು ಅಷ್ಟಾಗಿ ಸುಲಭವಲ್ಲ. ಆದರೂ ಅಗ್ನಿಪರ್ವತದ ಕುಂಡದಿಂದ ಆಗ ತಾನೇ ಹೊರಚಿಮ್ಮಿದ ಶಿಲಾರಸದ ಉಷ್ಣಾಂಶ ಸುಮಾರು 1500º-1600º ಸೆಂ.ಗ್ರೇ. ಇರಬೇಕೆಂದು ನಿರ್ಧರಿಸಲಾಗಿದೆ. ಶಿಲಾರಸಗಳ ಚಹರೆ ಹಲವು ಬಗೆಯಾಗಿರುತ್ತದೆ. ಕೆಲವು ಶಿಲಪ್ರವಾಹಗಳ ಮೇಲುಭಾಗ ನೊರೆ ಗಟ್ಟಿರುತ್ತದೆ. ದ್ರವತ್ವ ಕಡಿಮೆಯಿದ್ದಲ್ಲಿ ಇನ್ನೂ ಕೆಲವು ಗಟ್ಟಿಯಾದ ತಾರಿನಂತೆ ಹಗ್ಗದೋಪಾದಿಯಲ್ಲಿ ರೂಪುಗೊಳ್ಳುತ್ತವೆ. ರಸ ಕ್ರಮೇಣ ತಣ್ಣಗಾಗುತ್ತಾ ಬಂದಹಾಗೆಲ್ಲ ಮಿಲನವಾಗಿದ್ದ ಅನಿಲಗಳೆಲ್ಲವೂ ಸಣ್ಣ ಸಣ್ಣ ರಂಧ್ರಗಳ ಮೂಲಕ ಹೊರಹೊರಟು ರಂಧ್ರಗಳು ಹಾಗೆಯೇ ಪೊಳ್ಳು ಪೊಳ್ಳಾಗಿ ಉಳಿದು, ಗಟ್ಟಿಯಾದ ಮೇಲೆ ಸ್ಪಂಜಿನಂತೆ ಉಳಿದ ಕೆಲವು ಹಗುರಾಗುತ್ತವೆ. ಅಗ್ನಿಪರ್ವತದಿಂದ ಹೊರಬರುವ ಘನಾಂಶವನ್ನು ಅಗ್ನಿಶಿಲಾಛಿದ್ರಗಳೆಂದು ಕರೆಯುತ್ತಾರೆ. ಇವುಗಳ ಗಾತ್ರ ಸಣ್ಣ ಕಣಗಳಿಂದ ಹಿಡಿದು ದೊಡ್ಡ ಬಂಡೆಗಳವರೆಗೂ ಇರುತ್ತದೆ. ಧೂಳು ಅಥವಾ ಬೂದಿ, ಶಿಲಾರಸದಗಟ್ಟಿ, ಶಿಲಾರಸದ ಮುದ್ದೆ ಮತ್ತು ಶಿಲಾರಸದ ಗುಂಡು ಎಂದು ಇವನ್ನು ವಿಭಾಗಿಸಬಹುದು.

	ಭೂವಿಜ್ಞಾನಶಾಸ್ತ್ರದ ರೀತ್ಯ, ಹಲವು ಪರ್ವತಶ್ರೇಣಿಗಳು ಇತ್ತೀಚೆಗೆ ಉದ್ಭವವಾದುವು. ಇಂಥವುಗಳ ಸ್ಥಿರತೆ ಕಡಿಮೆಯಾದ್ದರಿಂದ ಇವು ಅಗ್ನಿಪರ್ವತಗಳಿಗೆ ಆವಾಸಸ್ಥಾನವಾಗಿರುತ್ತವೆ. ಆಲ್ಪ್ಸ್ ಮತ್ತು ಹಿಮಾಲಯ ಪರ್ವತಶ್ರೇಣಿ, ರಾಕಿ ಮತ್ತು ಆಂಡೀಸ್ ಪರ್ವತಶ್ರೇಣಿಗಳು ಈ ಗುಂಪಿಗೆ ಸೇರಿದುವು. ಜೊತೆಗೆ ಪೆಸಿಫಿಕ್ ಮತ್ತು ಮೆಡಿಟರೇನಿಯನ್ ಸಮುದ್ರತೀರಗಳು ಕೆಲವು ಪ್ರಸ್ಥಭೂಮಿಗಳು ಕೂಡ ಜ್ವಾಲಾಮುಖಿಗಳ ತವರು. ಇವಲ್ಲದೆ ಯಾವ ವಿವರಣೆಗೂ ಸೇರದ ಕೆಲವು ಅಗ್ನಿಪರ್ವತಗಳು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿವೆ.

	ಜಾಗೃತ ಅಗ್ನಿಪರ್ವತಗಳ ವಯಸ್ಸಿನ ಪ್ರಮಾಣ ಒಂದರಿಂದ ಮತ್ತೊಂದಕ್ಕೆ ವ್ಯತ್ಯಾಸಗೊಳ್ಳುತ್ತದೆ. ಸಿಸಿಲಿ ದ್ವೀಪದ ಎಟ್ನಾ ಅಗ್ನಿಪರ್ವತ ಕಳೆದ 2500 ವರ್ಷಗಳಿಂದಲೂ ಜೀವಂತವಾಗಿದೆ. ಕೆಲವು ಸುಪ್ತಪರ್ವತಗಳ ವಿರಾಮಾವಧಿ ನೂರು ವರ್ಷಕ್ಕೂ ಮೀರಿರಬಹುದು.
	ಅಗ್ನಿಪರ್ವತಗಳು ನಿದ್ರಾವಸ್ಥೆಯಿಂದ ಜಾಗೃದವಸ್ಥೆಗೆ ಮಾರ್ಪಡುವ ಮುನ್ನ ಕೆಲವು ಸೂಚನೆಗಳು ತೋರಿಬರುತ್ತವೆ. ಸಾಮಾನ್ಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಖ ಹೆಚ್ಚಾಗುತ್ತದೆ. ಹತ್ತಿರದಲ್ಲಿ ಹಿಮಗಡ್ಡೆಗಳಿದ್ದರೆ ಕರಗಿ ನೀರಾಗುತ್ತವೆ. ಬಾವಿಗಳಲ್ಲಿ ಮತ್ತು ಕೆರೆ ಕೊಳಗಳಲ್ಲಿ ನೀರು ಬತ್ತಿ ಹೋಗುತ್ತದೆ. ಪೈರುಪಚ್ಚೆಗಳು ಶಾಖದಿಂದ ಒಣಗಿ ಹೋಗುತ್ತವೆ. ಅಗ್ನಿಪರ್ವತದ ಕುಂಡದಲ್ಲಿನ ನೀರು ಇಂಗಿ ಹೋಗುತ್ತದೆ. ಇವುಗಳೆಲ್ಲದರ ಜೊತೆಗೆ ಕೆಲವು ಕಡೆ ಭೂಮಿ ಹಠಾತ್ತನೆ ನಡುಗಲು ಪ್ರಾರಂಭವಾಗುತ್ತದೆ.

	ಅಗ್ನಿಪರ್ವತಗಳಿರುವ ಕಡೆ ಮನುಷ್ಯವರ್ಗಕ್ಕೆ ವಿಪರೀತವಾದ ಪ್ರಾಣ ಮತ್ತು ಧನಹಾನಿ ಉಂಟಾಗುತ್ತದೆ. ಪ್ರಪಂಚದಲ್ಲಿ 270ಕ್ಕೂ ಹೆಚ್ಚು ಜಾಗೃತಜ್ವಾಲಾಮುಖಿಗಳಿದ್ದು, ಆಯಾ ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ನಷ್ಟವುಂಟಾಗುತ್ತಲೇ ಇರುತ್ತದೆ. ಇಷ್ಟಾದರೂ ಮಾನವವರ್ಗಕ್ಕೆ ಇವುಗಳಿಂದ ಮತ್ತೊಂದು ರೀತಿಯಲ್ಲಿ ಉಪಯೋಗವಾಗಿದೆ. ಪ್ರಕೃತಿಯಲ್ಲಿ ದೊರೆಯುವ ಗಂಧಕ, ನವಸಾಗರ, ಬೋರಿಕ್ ಆ್ಯಸಿಡ್ ಇವು ಒದಗುವುದು ಅಗ್ನಿಪರ್ವತಗಳ ಮೂಲಕವೇ. ಇದಲ್ಲದೆ ಐಸ್‍ಲೆಂಡ್ ಮತ್ತು ಅಮೆರಿಕಗಳಲ್ಲಿ ಬಿಸಿನೀರಿನ ಊಟೆಗಳಿಂದ ಬರುವ ನೀರನ್ನು ಅಡಿಗೆ ಮಾಡುವುದಕ್ಕೂ ಮತ್ತು ಬಟ್ಟೆ ಒಗೆಯುವುದಕ್ಕೂ ಉಪಯೋಗಿಸುತ್ತಾರೆ. ಕೆಲವು ಕಡೆ ಅತಿ ಆಳವಿಲ್ಲದ ಬಿಸಿನೀರಿನ ಊಟೆಗಳಿಂದ ಬರುವ ಆವಿಯನ್ನು ಕೈಗಾರಿಕೆಗಳಿಗೆ ಬಳಸುತ್ತಾರೆ. ಅಗ್ನಿಪರ್ವತಗಳಿಂದ ಹೊರಬರುವ ಹಬೆಯನ್ನುಪಯೋಗಿಸಿಕೊಂಡು ವಿದ್ಯುಚ್ಛಕ್ತಿ ಉತ್ಪಾದನಾಕೇಂದ್ರಗಳನ್ನು ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಬಳಸಲಾಗುವ ತಿರುಬಾನಿ ಯಂತ್ರಗಳನ್ನು ನಡೆಸಲು ಅಗ್ನಿಪರ್ವತದಿಂದ ಹೊರ ಬರುವ ಅಧಿಕ ಉಷ್ಣದ ಅನಿಲವನ್ನೇ ಬಳಸಿಕೊಳ್ಳುತ್ತಾರೆ.
(ನೋಡಿ- ಜ್ವಾಲಾಮುಖಿಜ-ಶಿಲೆ)
(ಎಂ.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ